SAVI NENAPU
SANDALWOOD
ಹಳ್ಳಿ ಹೈದನ 'ಐಶ್ ಲವ್ಸ್ ರಾಜ್'

ಸುವರ್ಣ ಮನರಂಜನೆ ವಾಹಿನಿಯ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಕಾರ್ಯಕ್ರಮದ ವಿಜೇತ ರಾಜೇಶನ ಭಾರೀ ಜನಪ್ರಿಯತೆಯನ್ನು ಬಳಸಿಕೊಂಡು ಚಿತ್ರ ನಿರ್ಮಿಸಲು ಹೊರಟಿರುವವರು ರವಿ ಎಂಬ ನಿರ್ದೇಶಕರು. ಇವರ ಬೆನ್ನಿಗೆ ಮೂವರು ನಿರ್ಮಾಪಕರಿದ್ದಾರಂತೆ.
'ಇದು ಪಕ್ಕಾ ಮಾಸ್ ಸಿನಿಮಾ. ದುನಿಯಾ ಚಿತ್ರದ ಛಾಯೆಯನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಹಳ್ಳಿ ಹುಡುಗನೊಬ್ಬ ಪೇಟೆಗೆ ಬರುವ ಕಥೆಯಿದು. ಸಾಕಷ್ಟು ಆಕ್ಷನ್, ಸೆಂಟಿಮೆಂಟ್, ಹಾಸ್ಯವಿರುತ್ತದೆ' ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರಕ್ಕೆ ಇಡಲಾಗಿರುವ ಹೆಸರು 'ಐಶ್ ಲವ್ಸ್ ರಾಜ್'.
ಪುನೀತ್ ಈಗ ಅಣ್ಣಾ ಬಾಂಡ್....!

ಜಾಕಿಯ ಭರ್ಜರಿ ಗೆಲುವಿನ ನಂತರ ಸೂರಿ ಮತ್ತು ಅಪ್ಪು ಮತ್ತೆ ಜೊತೆಯಗುತಿದ್ದಾರೆ. ಚಿತ್ರದ ಹೆಸರು ಅಣ್ಣಾ ಬಾಂಡ್ ಎಂದು ಇಡಲಾಗಿದೆ. ಈ ಚಿತ್ರವು ವಜ್ರೇಶ್ವರಿ ಸಂಸ್ಥೆಯಡಿ ನಿರ್ಮಿಸಲಾಗುತ್ತಿದೆ. 

ಶಿವರಾಜ್ ಕುಮಾರ್ 100ನೇ ಚಿತ್ರ ಪ್ರೇಮ್ ನಿರ್ದೇಶನದ 'ಜೋಗಯ್ಯ' ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ.ಈಗ 101ನೇ ಚಿತ್ರವೂ ಘೋಷಣೆಯಾಗಿದೆ. ಹೆಸರಿಡದ ಈ ಚಿತ್ರಕ್ಕೆ ನಾಯಕಿ ಬಹುಭಾಷಾ ತಾರೆ ಪ್ರಿಯಾಮಣಿ. 

ಶಿವಣ್ಣನ ನೂತನ ಚಿತ್ರವನ್ನು ನಿರ್ದೇಶಿಸುತ್ತಿರುವುದು ಈ ಹಿಂದೆ 'ಸತ್ಯ ಇನ್ ಲವ್' ಮೂಲಕ ಹ್ಯಾಟ್ರಿಕ್ ಹೀರೋಗೆ ಭಿನ್ನ ಗೆಟಪ್ ನೀಡಿದ್ದ ರಾಘವ್ ಲೋಕಿ. ಕ್ರಾಂತಿಕಾರಿ ಕಥೆಯಿದು, ಶಿವಣ್ಣ ಅವರದ್ದು ವಿಶಿಷ್ಟ ಪಾತ್ರ ಎಂದಷ್ಟೇ ನಿರ್ದೇಶಕರು ಹೇಳಿದ್ದಾರೆ.

ಡಿಸೆಂಬರ್ 14ರಿಂದ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಜನವರಿ 3ರಿಂದ ಅಧಿಕೃತವಾಗಿ ಶೂಟಿಂಗ್ ಆರಂಭವಾಗುತ್ತದೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದು.

ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿರುವವರು ಆಂಧ್ರಪ್ರದೇಶದ ರವಿ ಮತ್ತು ಭಾಸ್ಕರ್. ತಾರಾಗಣದಲ್ಲಿ ರಂಗಾಯಣ ರಘು, ಅವಿನಾಶ್, ದಿಲೀಪ್ ಮತ್ತು ಕೋಮಲ್ ಮಂತಾದವರಿರುತ್ತಾರೆ.
ಮುಂದಿನ ವರ್ಷ ನಂಗೆ ಶಿವಣ್ಣ ಹೀರೋ ಆಗ್ತಾರೆ: ರಮ್ಯಾ

ಅದೇನು ಲುಕ್ಕು, ಅದೇನು ಸ್ಟೆಪ್ಪು, ಈ ವಯಸ್ಸಿನಲ್ಲೂ ಇಂತಹ ಚಾರ್ಮ್ ಉಳಿಸಿಕೊಂಡಿದ್ದಾರೆಂದರೆ ನಿಜಕ್ಕೂ ಗ್ರೇಟ್. ಅವರು ನನ್ನ ಪ್ರಕಾರ ಕನ್ನಡದ ಅಮೀರ್ ಖಾನ್. ಹೀಗೆಂದು ಹೊಗಳಿ ಅಟ್ಟಕ್ಕೇರಿಸಿರುವುದು ಲಕ್ಕಿ ಸ್ಟಾರ್ ರಮ್ಯಾ.

ಶಿವಣ್ಣನ ಹೊಸ ಚಿತ್ರ 'ಮೈಲಾರಿ'ಯ ಪೋಸ್ಟರುಗಳನ್ನು ನೋಡಿರುವ ರಮ್ಯಾ ಪುಳಕಿತರಾಗಿದ್ದಾರೆ. ಅವರ ಸ್ಟೈಲಿಶ್ ಲುಕ್ ನಿದ್ದೆಗೆಡಿಸಿದೆ. ಸಖತ್ ಆನಂದವಾಗಿದೆ. ಈ ವಯಸ್ಸಲ್ಲೂ ಶಿವಣ್ಣ ಎಷ್ಟು ಯಂಗ್ ಮತ್ತು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ಎಂದು ಹುಬ್ಬೇರಿಸಿದ್ದಾರೆ.

ಹಾಗಾದ್ರೆ ಅವರ ಜತೆ ನೀವು ನಟಿಸೋದ್ಯಾವಾಗ? ಇಂತಹ ಪ್ರಶ್ನೆಗೆ ಒಂದು ಕ್ಷಣ ಮೌನವಾಗುವ ರಮ್ಯಾ, ಕಥೆಯತ್ತ ಬೆಟ್ಟು ಮಾಡಿ ಸುಮ್ಮನಾಗುತ್ತಾರೆ.

ನಾವು ಇದುವರೆಗೆ ತೆರೆಯ ಮೇಲೆ ಜಂಟಿಯಾಗಿ ಕಾಣಿಸಿಕೊಳ್ಳದೇ ಇರಲು ಪ್ರಮುಖ ಕಾರಣ ಸರಿಯಾದ ಕಥೆ ಸಿಗದೇ ಇರುವುದು. ನಮ್ಮಿಬ್ಬರ ಜೋಡಿ ಅಂದ ಮೇಲೆ ನಿರೀಕ್ಷೆಗಳು ಹೆಚ್ಚು. ಅದನ್ನು ಪೂರೈಸುವಂತಹ ಕಥೆಯ ಅಗತ್ಯ ನಮಗಿರುತ್ತದೆ. ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಮುಂದಿನ ವರ್ಷ ಖಂಡಿತಾ ನಾವು ಜತೆಯಾಗಿ ನಟಿಸುತ್ತೇವೆ ಎಂದು ರೈಲು ಹತ್ತಿಸಿದ್ದಾರೆ.

ಗೋಲ್ಡನ್ ಸ್ಟಾರ್ ಜತೆಗಿನ ಬಹುನಿರೀಕ್ಷೆಯ ಚಿತ್ರ 'ಬೊಂಬಾಟ್' ಸದ್ದಿಲ್ಲದೆ ಠುಸ್ಸಾಗಿದ್ದು ಕೂಡ ಅವರಿಗೆ ನೆನಪಿದೆ. ಶಿವಣ್ಣ ಜತೆಗಿನ ನನ್ನ ಚಿತ್ರ ಹಾಗಾಗಬಾರದು ಎನ್ನುವುದಕ್ಕೆ ಕಥೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

ಈ ನಡುವೆ ಮೈಲಾರಿ ಚಿತ್ರದ ಹಾಡುಗಳು ಕೂಡ ರಮ್ಯಾಗೆ ಸಖತ್ ಇಷ್ಟವಾಗಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡಂತೂ ತುಂಬಾ ಇಷ್ಟ ಎಂದಿದ್ದಾರೆ.
ಕುಮಾರ್ ರಿಮೇಕ್ ಪರ್ವದಲ್ಲಿ ಪ್ರಜ್ವಲ್, ಸುದೀಪ್, ರವಿಚಂದ್ರನ್

ಇತ್ತೀಚಿನ ವರ್ಷಗಳಲ್ಲಿ ಸ್ವಮೇಕಿಗಿಂತ ರಿಮೇಕ್ ಹಾವಳಿ ಜಾಸ್ತಿಯಾಗಿದೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಆದರೆ ಕನ್ನಡಕ್ಕೆ ಕೊಂಚ ಇದರ ಬಾಧೆ ಜಾಸ್ತಿ ಎಂದೇ ಹೇಳಬಹುದು. ಪರಭಾಷೆಯಲ್ಲಿ ಸೂಪರ್ ಹಿಟ್ ಆದ ಚಿತ್ರಗಳನ್ನು ಕಣ್ಮುಚ್ಚಿ ಕನ್ನಡಕ್ಕೆ ಭಟ್ಟಿ ಇಳಿಸಲು ಕೆಲವು ನಿರ್ಮಾಪಕ-ನಿರ್ದೇಶಕರು ಸಾಲುಗಟ್ಟಿ ನಿಲ್ಲುತ್ತಾರೆ.

ಅದಕ್ಕೆ ಸೇರ್ಪಡೆ ಎಂಬಂತೆ ಈಗ ನಿರ್ಮಾಪಕ, ವಿತರಕ ಎನ್. ಕುಮಾರ್ ಬರೋಬ್ಬರಿ ಮೂರು ಚಿತ್ರಗಳನ್ನು ರಿಮೇಕಿಸಲು ಹೊರಟಿದ್ದಾರೆ. ತೆಲುಗಿನ ರಣಂ, ಕಿಕ್ ಮತ್ತು ಸಿಂಹರಾಶಿ ಚಿತ್ರಗಳು ಕನ್ನಡಕ್ಕೆ ಶೀಘ್ರದಲ್ಲೇ ಬರಲಿವೆ.

ರಣಂ ಚಿತ್ರ ಕನ್ನಡದಲ್ಲಿ 'ಭದ್ರ'ನಾಗಿ ಬರಲಿದ್ದು, ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಲಿದ್ದಾರೆ. 'ಭದ್ರ' ಮುಗಿಯುತ್ತಿದ್ದಂತೆ 'ಕಿಕ್'ನಲ್ಲಿ ಸುದೀಪ್ ಹಾಗೂ 'ಸಿಂಹರಾಶಿ'ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಲೆ ತೂರಿಸಲಿದ್ದಾರೆ. ಇವೆರಡೂ ಚಿತ್ರಗಳ ಹೆಸರುಗಳು ಮತ್ತು ನಿರ್ದೇಶಕರು ಯಾರೆಂಬುದು ಸದ್ಯದ ಮಟ್ಟಿಗೆ ಸೀಕ್ರೆಟ್!

ಇಲ್ಲಿ ಮತ್ತೊಂದು ಹೇಳಲೇಬೇಕಾದ ಪ್ರಸಂಗವಿದೆ. ಮೇಲಿನ ಮೂರು ರಿಮೇಕ್ ಚಿತ್ರಗಳನ್ನು ನಿರ್ಮಿಸುತ್ತಿರುವ ಮತ್ತು 'ಆಸ್ಕರ್' ಎಂಬ ಸ್ವಮೇಕ್ ಚಿತ್ರವನ್ನು ನಿರ್ಮಿಸಿರುವ ಎನ್. ಕುಮಾರ್, ಅದರ ನಿರ್ದೇಶಕ ಕೃಷ್ಣ ಮತ್ತು ಸ್ವಮೇಕ್‌ವಾದಿ ಶಿವು ಪಿ. ಬೆಳವಾಡಿ ಉಪಸ್ಥಿತಿಯಲ್ಲಿ ನಡೆದಿರುವ ಗಮ್ಮತ್ತಿದು.

ಏನೇ ಆದರೂ ರಿಮೇಕ್ ಚಿತ್ರಗಳನ್ನು ಮಾಡಬಾರದು, ಸ್ವಮೇಕ್ ಅನ್ನೇ ಮಾಡಬೇಕು ಎನ್ನುವ ನನ್ನ ಹಂಬಲ ಎಂದು 'ಆಸ್ಕರ್' ನಿರ್ದೇಶಕ ಕೃಷ್ಣ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿಬಿಟ್ಟರು. ಇದನ್ನು ಕೇಳಿದ ನಿರ್ಮಾಪಕ ಕುಮಾರ್ ಹಿಂದೆ ಮುಂದೆ ನೋಡದೆ ಚಪ್ಪಾಳೆಯನ್ನೂ ಹೊಡೆದರು. ಪಕ್ಕದಲ್ಲಿ ನೋಡಿದರೆ ಸ್ವಮೇಕ್‌ವಾದಿ ಶಿವು ಗುರುಗುಟ್ಟಿಕೊಂಡು ನೋಡುತ್ತಿದ್ದರು.

ಕಾರಣ ಗೊತ್ತೇ ಇದೆಯಲ್ಲ. ಬರೋಬ್ಬರಿ ಮೂರು ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಭಟ್ಟಿ ಇಳಿಸಲು ಹಕ್ಕುಗಳನ್ನು ತೆಗೆದುಕೊಂಡು, ಈಗ ಸ್ವಮೇಕ್ ಪರ ಚಪ್ಪಾಳೆ ಬಡಿದಾಗ ಯಾರಾದರೂ ಸುಮ್ಮನಿರುತ್ತಾರೆ, ಹೌದು ತಾನೇ?

ಸಂಜು ಮದುವೆ ರದ್ದು, ಜಾನಿ ಜತೆ ರಮ್ಯಾ ಸುತ್ತಾಟ 

ಗೊಂದಲಕ್ಕೀಡಾಗಿದ್ದೀರಾ? ವಿಷಯ ಇಷ್ಟೇ, 'ಸಂಜು ವೆಡ್ಸ್ ಗೀತಾ' ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ರದ್ದಾಗಿದೆ. ಅತ್ತ 'ಜಾನಿ ಮೇರಾ ನಾಮ್' ಚಿತ್ರದ್ದು ಆರಂಭವಾಗಿದೆ. ಎರಡೂ ಚಿತ್ರಗಳಲ್ಲಿ ರಮ್ಯಾ ಹೀರೋಯಿನ್. ಒಂದು ದೋಣಿ ಮುಂದೆ ಹೋಗದೇ ಇದ್ದಾಗ, ಮತ್ತೊಂದು ದೋಣಿಗೆ ಹಾರಿದ್ದಾರೆ.

ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ'ದಲ್ಲಿ ಶ್ರೀನಗರ ಕಿಟ್ಟಿಗೆ ರಮ್ಯಾ ಜೋಡಿ. ಇತ್ತೀಚೆಗಷ್ಟೇ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದ ಚಿತ್ರೀಕರಣ ಇಸ್ತಾನ್‌ಬುಲ್‌ನಲ್ಲಿ ನಡೆಯಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಯೋಜನೆಗಳು ಬದಲಾಗಿವೆ.

ನಾವು ಟರ್ಕಿಯಲ್ಲಿ ಹಾಡೊಂದರ ಚಿತ್ರೀಕರಣ ನಡೆಸಲು ಉದ್ದೇಶಿಸಿದ್ದೆವು. ಆದರೆ ಅಲ್ಲಿನ ವಾತಾವರಣದ ಕಾರಣದಿಂದಾಗಿ ನವೆಂಬರ್ 30ರಂದು ನಾವು ಚಿತ್ರೀಕರಣ ರದ್ದುಗೊಳಿಸಲು ನಿರ್ಧರಿಸಿದೆವು. ಬೇರೆಲ್ಲಾ ಚಿತ್ರೀಕರಣ ಮುಗಿದಿದೆ. ಕೇವಲ ಒಂದು ಹಾಡನ್ನು ಸೇರಿಸಲು ಬಾಕಿಯಿದೆ. ಜನವರಿಯಲ್ಲಿ ಚಿತ್ರ ತೆರೆಗೆ ಬರುತ್ತಿದೆ ಎಂದು ನಾಗಶೇಖರ್ ತಿಳಿಸಿದ್ದಾರೆ.

ಚಿತ್ರತಂಡ ಬೆಂಗಳೂರಿನಿಂದ ಹೊರಟಿಲ್ಲವಾದರೂ, ರಮ್ಯಾ ಮೊದಲೇ ಟರ್ಕಿಯಲ್ಲಿದ್ದರು. ಈಗ ಅವರು ಕೂಡ ವಾಪಸ್ಸಾಗಿದ್ದಾರೆ.

ಅತ್ತ ಪ್ರೀತಂ ಗುಬ್ಬಿ ನಿರ್ದೇಶನದ 'ಜಾನಿ ಮೇರಾ ನಾಮ್' ಚಿತ್ರೀಕರಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆರಂಭವಾಗಿದೆ. ಈ ಚಿತ್ರದಲ್ಲಿ ಕರಿಚಿರತೆ ವಿಜಯ್ ನಾಯಕ. ಹಾಡಿನ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ. ರಮ್ಯಾ ಇವರನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗುಬ್ಬಿ ತಿಳಿಸಿದ್ದಾರೆ.

ಗುಬ್ಬಿಯವರ ವಿಭಿನ್ನ ಚಿತ್ರಕಥೆ ವಿಜಯ್‌ರಿಗೆ ಅಚ್ಚರಿಯನ್ನುಂಟು ಮಾಡಿದೆ. ಭಿನ್ನ ಚಿತ್ರ ಎಂದಿದ್ದಾರೆ ಅವರು. ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿ. ಹರಿಕೃಷ್ಣ. ಎಸ್. ಕೃಷ್ಣ ಕ್ಯಾಮರಾ ಹಿಡಿದಿದ್ದಾರೆ.
                  ಸಾಹಸಸಿಂಹ ವಿಷ್ಣುವರ್ದನ್ 'ಆಪ್ತರಕ್ಷಕ' ವಿದೇಶಕ್ಕೂ ಲಗ್ಗೆ




ವಿದೇಶಗಳಲ್ಲಿ ನೆಲೆಸಿರುವ ವಿಷ್ಣು ಅಭಿಮಾನಿಗಳ ಬಯಕೆ ಕೊನೆಗೂ ಈಡೇರಿದೆ. ಸಾಹಸಸಿಂಹ ದಿವಂಗತ ವಿಷ್ಣುವರ್ದನ್ ಅಭಿನಯದ 200ನೇ ಹಾಗೂ ಕೊನೆಯ ಚಿತ್ರ 'ಆಪ್ತ ರಕ್ಷಕ'ದ ಡಿವಿಡಿ ಹಾಗೂ ವಿಸಿಡಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಡಿವಿಡಿಯನ್ನು ಜನಪ್ರಿಯ ಮೋಸರ್ಬೇರ್ ಹೊರತಂದಿದೆ. ಬ್ಲೂ ರೇ ಡಿಸ್ಕ್ ವಿನ್ಯಾಸದಲ್ಲಿರುವ ಡಿವಿಡಿ ನೋಡುಗರಿಗೆ ಸಮೃದ್ಧ ಅನುಭವ ನೀಡಲಿದೆ. ಬ್ಲೂ ರೇ ಡಿಸ್ಕ್‌ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಖ್ಯಾತಿಗೂ ‘ಆಪ್ತರಕ್ಷಕ’ ಪಾತ್ರವಾಗಿದೆ. 
ನಟ ರಮೇಶ್ ಅರವಿಂದ್ ಅವರು ‘ಆಪ್ತರಕ್ಷಕ’ ಡಿವಿಡಿಯನ್ನು ಇತ್ತೀಚೆಗೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಯನ್ಸ್ ಟೈಮ್ಔಟ್ ಮಳಿಗೆಯಲ್ಲಿ ಬಿಡುಗಡೆ ಮಾಡಿದರು. 

ಸಾಹಸಸಿಂಹ ವಿಷ್ಣುವರ್ದನ್ ಅವರ ಕೊನೆಯ ಚಿತ್ರ ‘ಆಪ್ತರಕ್ಷಕ’ ಕನ್ನಡದ ಸೂಪರ್ ಹಿಟ್ ಚಿತ್ರ. ‘ಆಪ್ತರಕ್ಷಕ’ ಬಿಡುಗಡೆಯಾದ ದಿನದಿಂದಲೇ ಭರ್ಜರಿ ಆರಂಭ ಕಂಡಿತ್ತು. ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಇದರ ಡಿವಿಡಿ/ವಿಸಿಡಿ ಬಿಡುಗಡೆ ನಡೆದದ್ದು ವರ್ಣರಂಜಿತ ಸಮಾರಂಭದಲ್ಲಿ. ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

‘ಆಪ್ತರಕ್ಷಕ’ದಲ್ಲಿ ಡಾ. ವಿಷ್ಣುವರ್ದನ್ ಜತೆ ಸಂಧ್ಯಾ, ವಿಮಲಾ ರಾಮನ್, ಅವಿನಾಶ್, ಶ್ರೀನಿವಾಸ ಮೂರ್ತಿ, ಭಾವನಾ, ಲಕ್ಷ್ಮಿ ಗೋಪಾಲಸ್ವಾಮಿ, ಕೋಮಲ್ ಮುಂತಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತವಿದೆ. ಪಿ. ವಾಸು ನಿರ್ದೇಶನದ ಚಿತ್ರವಿದು. 2004ರಲ್ಲಿ ವಾಸು ನಿರ್ದೇಶನದ, ವಿಷ್ಣುವರ್ದನ್ ಅಭಿನಯದ ‘ಆಪ್ತಮಿತ್ರ’ ಕೂಡ ಅಭೂತಪೂರ್ವ ಯಶಸ್ಸು ಗಳಿಸಿತ್ತು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಗುರುಕಿರಣ್ ಅವರ ಸಂಗೀತ ಯಶಸ್ವಿಯಾಗಿದೆ. ವಿಮಲಾ ರಾಮನ್ ನೃತ್ಯ ಹಾಗೂ ನಾಗವಲ್ಲಿಯಾಗಿ ಅಭಿನಯ ಮನ್ನಣೆ ಗಳಿಸಿದೆ. ಡಿವಿಡಿ ದರ ರೂ. 125 ಮತ್ತು ವಿಸಿಡಿ ದರ ರೂ.49. ವಿದೇಶಗಳಲ್ಲಿರುವವರು ಕೂಡ ಸಂಸ್ಥೆಯಿಂದ ಇಂಟರ್ನೆಟ್ ಮೂಲಕ ಡಿವಿಡಿಗಳನ್ನು ಖರೀದಿಸಬಹುದಾಗಿದೆ.